ಪಂಚೇಂದ್ರೋಪಾಖ್ಯಾನ -
ಇದು ಪಂಚಪಾಂಡವರ ಪೂರ್ವ ವೃತ್ತಾಂತಕ್ಕೆ ಸಂಬಂಧಿಸಿದ ಕಥೆ. ಮಹಾಭಾರತದ ಆದಿಪರ್ವದಲ್ಲೂ ಮಾರ್ಕಂಡೇಯ ಪುರಾಣದಲ್ಲೂ ಇದರ ಉಲ್ಲೇಖವಿದೆ. ದೇವತೆಗಳು ಸತ್ರಯಾಗ ಮಾಡುತ್ತಿರುವಾಗ ಇಂದ್ರ ಬಂದು ನೋಡಲಾಗಿ ಗಂಗೆಯಲ್ಲಿ ಸುವರ್ಣಮಯವಾದ ಕಮಲವೊಂದು ತೇಲಿಬರುತ್ತಿರುವುದನ್ನು ಕಂಡು ಆಶ್ಚರ್ಯಭರಿತನಾಗಿ ಅದು ಎಲ್ಲಿಂದ ಬಂತೆಂದು ತಿಳಿಯಲು ಗಂಗಾಮೂಲಕ ಕಡೆ ಹೊರಟು ಮೂಲಸ್ಥಾನದಲ್ಲಿ ಒಬ್ಬ ಸುಂದರ ಸ್ತ್ರೀ ಅಳುತ್ತ ಸ್ನಾನಮಾಡುತ್ತಿರುವುದನ್ನು ಕಂಡ. ಆಕೆ ಸುರಿಸಿದ ಕಣ್ಣೀರಿನ ಒಂದೊಂದು ಹನಿಯೂ ಒಂದೊಂದು ಸುವರ್ಣಕಮಲವಾಗಿ ನದಿಯಲ್ಲಿ ತೇಲಿಬರುತ್ತಿತ್ತು. ಆಕೆ ಇಂದ್ರನನ್ನು ಒಂದು ಪರ್ವತ ಶಿಖರಕ್ಕೆ ಕರೆದುಕೊಂಡು ಹೋದಳು. ಅಲ್ಲಿ ಶಿವ ಸುಂದರ ಯುವಕನ ವೇಷ ಧರಿಸಿ ಪಾರ್ವತಿಯೊಂದಿಗೆ ಚದುರಂಗವಾಡುತ್ತಿದ್ದ. ಆಟದಲ್ಲಿ ಮಗ್ನನಾದ ಯುವಕ, ಇಂದ್ರನನ್ನು ಗಮನಕ್ಕೆ ತೆಗೆದುಕೊಳ್ಳಲಿಲ್ಲ. ಅದರಿಂದ ಇಂದ್ರ ಕೋಪಗೊಂಡ. ಯುವಕನ ವೇಷದಲ್ಲಿದ್ದ ಶಿವ ಅದನ್ನರಿತು ಓರೆಗಣ್ಣಿನಿಂದ ಇಂದ್ರನನ್ನು ನೋಡಲಾಗಿ ಆತ ಎಚ್ಚರ ತಪ್ಪಿ ನಿಂತ. ಯುವಕ ವೇಷದಲ್ಲಿದ್ದ ಶಿವ ಇಂದ್ರನನ್ನು ಕುರಿತು, ನಿನ್ನ ಅಹಂಕಾರವನ್ನು ಸಾಕು ಮಾಡು, ನೀನು ನಿಜವಾಗಿಯೂ ಬಲಶಾಲಿಯಾಗಿದ್ದರೆ ಪರ್ವತ ಶಿಖರವನ್ನೇರಿ ನೋಡು, ಅಲ್ಲಿ ನಿನ್ನಂಥ ಎಷ್ಟು ಮಂದಿ ಇಂದ್ರರು ಇದ್ದಾರೆಂಬುದು ತಿಳಿಯುತ್ತದೆ ಎಂದು ಹೇಳಿದ. ಇಂದ್ರ ಶಿಖರವನ್ನು ಏರಿ ನೋಡಲಾಗಿ, ಅಲ್ಲಿ ಇವನಂಥ ನಾಲ್ವರು ಇಂದ್ರರಿದ್ದರು. ಆಗ ಶಿವ ತನ್ನ ನಿಜರೂಪದಿಂದ ಅಲ್ಲಿಗೆ ಬಂದು 'ನೀನು ಅಹಂಕಾರದಿಂದ ನನ್ನನ್ನು ತಿರಸ್ಕಾರದಿಂದ ಕಂಡೆ. ಆದುದ್ದರಿಂದ ನೀನೂ ಇವರೊಂದಿಗೆ ಸೆರೆಯಲ್ಲಿರು, ಎಂದು ಹೇಳಿದ. ಆಗ ಇಂದ್ರ ಕ್ಷಮೆಯಾಚಿಸಲಾಗಿ ಶಿವ ನೀವು ಭೂಲೋಕದಲ್ಲಿ ಮನುಷ್ಯರಾಗಿ ಜನಿಸಿ ಧೈರ್ಯ ಶೌರ್ಯ ಸಾಹಸಗಳಿಂದ ಅದ್ಭುತಕಾರ್ಯಗಳನ್ನು ಮಾಡಿ ಮತ್ತೆ ಇಂದ್ರ ಲೋಕಕ್ಕೆ ಬನ್ನಿ, ಆಗ ಈ ಸ್ತ್ರೀ ನಿಮ್ಮೈವರ ಹೆಂಡತಿಯಾಗುತ್ತಾಳೆ ಎಂದು ಹೇಳಿದ. ಆಗ ವಿಶ್ವಭುಕ್, ಭೂತಧಾಮ, ಶಿಬಿ, ಶಾಂತಿ, ತೇಜಸ್ವಿ ಎಂಬ ಹೆಸರಿನ ಐವರು ಇಂದ್ರರು ಶಿವನನ್ನು 'ಯಮ, ವಾಯು, ಇಂದ್ರ ಅಶ್ವಿನಿದೇವತೆಗಳು ನಮಗೆ ಜನಕರಾಗುವಂತೆ ಅನುಗ್ರಹಿಸಬೇಕು ಎಂದು ಬೇಡಿಕೊಂಡರು. ಶಿವ ತಥಾಸ್ತು ಎಂದ. ಹೀಗೆ ಐವರು ಇಂದ್ರರು ಪಂಚಪಾಂಡವರಾಗಿ ಜನಿಸಿದರು. ಆ ಸ್ತ್ರೀ ದ್ರೌಪದಿಯಾದಳು. ಶಿವ ಆಗ ಬಿಸುಟ ಬಿಳಿ ಮತ್ತು ಕಪ್ಪು ಕೂದಲುಗಳಿಂದ ಕ್ರಮವಾಗಿ ಬಲರಾಮನೂ ಕೃಷ್ಣನೂ ಜನಿಸಿದರು.		    (ಡಿ.ಕೆ.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ